ದೀಪ್ತ ರಂಗುಗಳು
 	ದೀಪ್ತ ವಸ್ತುಗಳನ್ನು ಒಳಗೊಂಡಿರುವಂಥ ರಂಗುಗಳು (ಲ್ಯೂಮಿನಸ್ ಪೇಯಿಂಟ್ಸ್). ತಮ್ಮ ಮೇಲೆ ಬಿದ್ದ ಬೆಳಕನ್ನು ಗ್ರಹಿಸಿ ಅನಂತರ ಕತ್ತಲಲ್ಲೂ ಹೊಳೆಯಬಲ್ಲ ಕೆಲವು ಸಂಯುಕ್ತಗಳಿವೆ. ಇಂಥ ದ್ಯುತಿಗ್ರಾಹಿ ಪದಾರ್ಥಗಳಿಗೆ ಭಾಸ್ವರಗಳೆಂದೂ (ಫಾಸ್ಪರ್ಸ್) ಈ ವಿದ್ಯಮಾನಕ್ಕೆ ಸ್ಫುರದೀಪ್ತಿ (ಫಾಸ್ಫರಸೆನ್ಸ್) ಎಂದೂ ಹೆಸರುಂಟು. ವಸ್ತುವಿನಲ್ಲಿ ಅಣುಗಳೂ ಅಣುಗಳಲ್ಲಿ ಪರಮಾಣುಗಳೂ ಪರಮಾಣುಗಳಲ್ಲಿ ಎಲೆಕ್ಟ್ರಾನುಗಳೂ ಇವೆಯಷ್ಟೆ. ಆಪಾತ ದ್ಯುತಿ ಶಕ್ತಿಯನ್ನು ಹೀರಿದ ಎಲೆಕ್ಟ್ರಾನುಗಳು ಕೆಳಗಿನ ಶಕ್ತಿ ಮಟ್ಟಗಳಿಂದ ಉನ್ನತ ಶಕ್ತಿಮಟ್ಟಗಳಿಗೆ ಜಿಗಿದು ಕೆಲಕಾಲಾನಂತರ (ಅಂದರೆ 8 - 10 ಸೆಕೆಂಡುಗಳಿಗೆ ಮೀರಿ) ತಮ್ಮ ಹಿಂದಿನ ಶಕ್ತಿಮಟ್ಟಗಳಿಗೆ ಹಿಂತಿರುಗುತ್ತವೆ. ಆಗ ಶಕ್ತಿ ವಿಸರ್ಜನೆಯಾಗುವುದು. ಹಾಗೆ ಬಿಡುಗಡೆಯಾದ ಶಕ್ತಿಯನ್ನು ಗೋಚರ ಬೆಳಕಿನ ರೂಪದಲ್ಲಿ ಹೊರಚೆಲ್ಲುವುದು ಈ ಪದಾರ್ಥಗಳ ವೈಶಿಷ್ಟ್ಯ. ಇಂಥ ಪದಾರ್ಥಗಳನ್ನು ಒಳಗೊಂಡ ರಂಗುಗಳೇ ದೀಪ್ತ ರಂಗುಗಳು. ಕೆಲವು ದೀಪ್ತ ರಂಗುಗಳ ಸಂಯೋಜನೆ ಹೀಗಿದೆ : 

1. ಸ್ವಿಸ್ ಏಕಸ್ವಸಂಖ್ಯೆ 172076
ಸ್ಯಾಂಡರಾಕ್	-----	36 ಗ್ರಾಮ್
ರೋಸಿನ್ (ರಾಳ)	-----	18  "
ಪ್ಯಾರಫಿನ್	-----	4   "
ಆಲ್ಕೋಹಾಲ್ 	-----	35  "
ಪೆಟ್ರೋಲಿಯನ್ ಈಥರ್	-----	10 "
ಟ್ರೈಕ್ರೆಸೈಲ್ ಫಾಸ್ಫೇಟ್	-----	1  "
ಬೆನ್ಸಾಯಿನ್ ಅಂಟು	-----	2  "

ಮಿಶ್ರಣವನ್ನು ಲಘುವಾಗಿ ಕಾಸಿದರೆ ದ್ರಾವಣವಾಗುವುದು. ದ್ರಾವಣವನ್ನು ಸುಟ್ಟ ಸುಣ್ಣದಿಂದ ಶುಷÀ್ಕಗೊಳಿಸಿ ಅನಂತರ ಸೋಸಬೇಕು. ಈಗ 65 ಗ್ರಾಂ ಮಿಶ್ರಣವನ್ನು 35 ಗ್ರಾಂ ಸ್ಟ್ರಾನ್ಷಿಯಮ್ ಸಲ್ಫೈಡಿನೊಂದಿಗೆ ಮಿಳಿತಮಾಡಿದರೆ ಅಪೇಕ್ಷಿತ ರಂಗು ದೊರೆಯುವುದು.

2. ಹಸಿರು ಮಿಶ್ರಿತ ನೀಲಿ ಭಾಸ್ವರ
ಸ್ಟ್ರಾನ್ಷಿಯಮ್ ಹೈಡ್ರಾಕ್ಸೈಡ್	-----	20.7 ಗ್ರಾಂ
ಗಂಧಕ 	-----	8     "
ಲಿಥಿಯಮ್ ಸಲ್ಫೇಟ್ 	-----	1     "
ಕಲಿಲ ಸ್ಥಿತಿಯಲ್ಲಿರುವ ಬಿಸ್ಮತ್ 	-----	6    ಮಿಲಿ
( 0.3 % ಜಲೀಯ ನಿಲಂಬನ)

ಮಿಶ್ರಣವನ್ನು 40 ಮಿನಿಟುಗಳ ತನಕ ಕಾಸಿದರೆ ಅದು ಕೆಂಗಾವಿಗೆ ಬರುವುದು. ಅನಂತರ ಅದನ್ನು ನಿಧಾನವಾಗಿ ತಣಿಸಬೇಕು.

3. ಕೆಂಪು ಭಾಸ್ವರ 
ಬೇರಿಯಮ್ ಆಕ್ಸೈಡ್ 	-----	40    ಗ್ರಾಂ
ಗಂಧಕ 	-----	9     ಗ್ರಾಂ
ಲಿಥಿಯಮ್ ಫಾಸ್ಫೇಟ್	-----	0.7    ಗ್ರಾಂ
ಕ್ಯುಪ್ರಿಕ್ ನೈಟ್ರೇಟ್ ದ್ರಾವಣ 	-----	3.5    ಮಿಲೀ.
( 0.4 % ಆಲ್ಕೋಹಾಲಿಕ್ ದ್ರಾವಣ)

4.  ಕೆಂಪು ಭಾಸ್ವರ 
ಮೆಗ್ನಿಸಿಯಮ್ ಫಾಸ್ಫೇಟ್ 	-----	40     ಗ್ರಾಂ
ಲಿಥಿಯಮ್ ಸಲ್ಫೇಟ್ 	-----	0.7     ಗ್ರಾಂ
ಕ್ಯುಪ್ರಿಕ್ ನೈಟ್ರೇಟ್ ದ್ರಾವಣ 	-----	3.5     ಮಿ.ಲೀ.
( 0.4 % ಆಲ್ಕೋಹಾಲಿಕ್ ದ್ರಾವಣ)
ಪ್ರಧಾನವಾಗಿ ದೀಪ್ತ ಕ್ಯಾಲ್ಸಿಯಮ್ ಸಲ್ಫೈಡನ್ನು ಒಳಗೊಂಡ ಕೆಲವು ರಂಗುಗಳ ಸಣಯೋಜನೆಗಳನ್ನು ಮುಂದೆ ಕೊಡಲಾಗಿದೆ.
1. ಬಿಳಿ
ದೀಪ್ತ ಕ್ಯಾಲ್ಸಿಯಮ್ ಸಲ್ಫೈಡ್ 	-----	20     ತೂಕ ಭಾಗ
ಸತುವಿನ ಆಕ್ಸೈಡ್ 	-----	10     ತೂಕ ಭಾಗ
ಬೇರಿಯಮ್ ಸಲ್ಫೇಟ್ 	-----	10 	ತೂಕ ಭಾಗ
ವಾರ್ನಿಷ್ 	-----	30     ತೂಕ ಭಾಗ
2. ಹಳದಿ
ದೀಪ್ತ ಕ್ಯಾಲ್ಸಿಯಮ್ ಸಲ್ಫೈಡ್ 	-----	20     ತೂಕ ಭಾಗ
ಬೇರಿಯಮ್ ಸಲ್ಫೈಡ್ 	-----	5      ತೂಕ ಭಾಗ
ಆರ್ಪಿಮೆಂಟ್ 	-----	4      ತೂಕ ಭಾಗ
ವಾರ್ನಿಷ್ 	-----	25     ತೂಕ ಭಾಗ
3. ಕೆಂಪು
ದೀಪ್ತ ಕ್ಯಾಲ್ಸಿಯಮ್ ಸಲ್ಫೈಡ್ 	-----	20     ತೂಕ ಭಾಗ
ಬೇರಿಯಮ್ ಸಲ್ಫೈಡ್ 	-----	5      ತೂಕ ಭಾಗ
ರೀಲ್ಗರ್ 	-----	4      ತೂಕ ಭಾಗ
ವಾರ್ನಿಷ್ 	-----	25     ತೂಕ ಭಾಗ
4. ಹಸುರು
ದೀಪ್ತ ಕ್ಯಾಲ್ಸಿಯಮ್ ಸಲ್ಫೈಡ್ 	-----	20     ತೂಕ ಭಾಗ
ಬೇರಿಯಮ್ ಸಲ್ಫೈಡ್ 	-----	5      ತೂಕ ಭಾಗ
ಅಲ್ಟ್ರಾಮ್ಯಾರೈನ್ ನೀಲಿ 	-----	3      ತೂಕ ಭಾಗ
(ಫ್ರೆಂಚ್)
ಕೋಬಾಲ್ಟ್ ನೀಲಿ 	-----	3      ತೂಕ ಭಾಗ
ವಾರ್ನಿಷ್ 	-----	28 -30   ತೂಕ ಭಾಗ
5. ನೇರಿಳೆ
ದೀಪ್ತ ಕ್ಯಾಲ್ಸಿಯಮ್ ಸಲ್ಫೈಡ್ 	-----	20     ತೂಕ ಭಾಗ
ಬೇರಿಯಮ್ ಸಲ್ಫೈಡ್ 	-----	5     ತೂಕ ಭಾಗ
ನೇರಿಳೆ ಲೇಕ್ 	-----	2     ತೂಕ ಭಾಗ
ವಾರ್ನಿಷ್ 	-----	25     ತೂಕ ಭಾಗ
     ಹಳದಿ ಬಣ್ಣ ಬೀರುವ ಎರಡು ದೀಪ್ತ ರಂಗುಗಳ ಸಂಯೋಜನೆ ಹೀಗಿದೆ:
	   I		    II
	ತೂಕ ಭಾಗ		ತೂಕ ಭಾಗ
ಸ್ಟ್ರಾನ್ಷಿಯಮ್ ಕಾರ್ಬೊನೇಟ್	100		100
ಗಂಧಕ	100		30
ಪೊಟ್ಯಾಸಿಯಮ್ ಕ್ಲೋರೈಡ್	0.5		---
ಸೋಡಿಯಮ್ ಕಾರ್ಬೊನೇಟ್	---		2
ಸೋಡಿಯಮ್ ಕ್ಲೋರೈಡ್	9.5		0.5
ಮ್ಯಾಂಗ್‍ನೀಸ್ ಕ್ಲೋರೈಡ್	0.4		0.2

ಮಿಶ್ರಣವನ್ನು ಮೂಸೆಯಲ್ಲಿಟ್ಟು ಮುಕ್ಕಾಲು ತಾಸಿನ ವರೆಗೆ ಸುಮಾರು 1300 0 ಅ. ಉಷ್ಣತೆಯಲ್ಲಿ ಕಾಸಿ ತಣಿಸಬೇಕು.
ಗಡಿಯಾರದ ಮುಳ್ಳುಗಳು ಕತ್ತಲಲ್ಲೂ ಕಾಣುವಂತೆ ಮಾಡಲು ಅವುಗಳಿಗೆ ಕೆಲವು ಶಾಶ್ವತ ದೀಪ್ತ ರಂಗುಗಳನ್ನು ಹಚ್ಚಿರುತ್ತಾರೆ. ಸಾಮಾನ್ಯವಾಗಿ ಅವುಗಳಲ್ಲಿ ಇರುವುದು ಸತುವಿನ ಸಲ್ಫೈಡ್ ಮತ್ತು ರೇಡಿಯಮ್ ಬ್ರೊಮೈಡುಗಳ ಮಿಶ್ರಣ. ರೇಡಿಯಮ್ ವಿಕಿರಣಪಟು ಧಾತು. ಅದು ವಿಸರ್ಜಿಸುವ ಅಲ್ಫ ಕಣಗಳು ಸತುವಿನ ಸಲ್ಫೈಡಿಗೆ ಬಡಿದಾಗ ಸ್ಫುರಣ ಉಂಟಾಗುವುದು.
ಭಾಸ್ವರದ ಎಲೆಕ್ಟ್ರಾನುಗಳನ್ನು ಉದ್ರೇಕಿಸಲು ಪರ್ಯಾಯ ಮಿದ್ಯುತ್ತನ್ನೂ ಬಳಸಬಹುದು. ಆ ವಿದ್ಯಮಾನಕ್ಕೆ ವೈದ್ಯುತ ಭಾಸ್ವರಣ ಎಂದು ಹೆಸರು. ವಿರುದ್ಧ ವಿದ್ಯುದಾವೇಶವುಳ್ಳ ಎರಡು ಫಲಕಗಳ ನಡುವೆ ಭಾಸ್ವರವನ್ನು ಇಡಲಾಗುವುದು. ಫಲಕಗಳ ವಿದ್ಯದಾವೇಶದ ಚಿಹ್ನೆ ಕ್ಷಣ ಕ್ಷಣ ಬದಲಾಗುತ್ತಿರುವುದನ್ನು ಅಂದರೆ ಮೊದಲು ಒಂದನೆಯ ಫಲಕ ಧನಧ್ರುವವಾಗಿದ್ದರೆ ಎರಡನೆಯ ಫಲಕ ಋಣಧ್ರುವವಾಗುವುದು. ಮರುಕ್ಷಣವೇ ಒಂದನೆಯ ಫಲಕ ಋಣಧ್ರುವ ಮತ್ತು ಎರಡನೇಯ ಫಲಕ ಧನಧ್ರುವಗಳಾಗಿ ಬಿಡುವವು. ಎಲೆಕ್ಟ್ರಾನುಗಳು ಋಣ ವಿದ್ಯುದಾವೇಶವುಳ್ಳ ಕಣಗಳಾಗಿದ್ದರಿಂದ ಸ್ವಾಭಾವಿಕವಾಗಿ ಧನ ಫಲಕದ ಕಡೆಗೆ ಆಕರ್ಷಿಸಲ್ಪಡುತ್ತವೆ. ಇದರಿಂದ ಅವು ಫಲಕಗಳ ನಡುವೆ ಓಡಾಡುತ್ತವೆ. ಧನ - ಋಣ ಧ್ರುವ ಬದಲಾವಣೆಗೆ ಒಂದು ಚಕ್ರ (ಸೈಕಲ್) ಎಂದು ಹೆಸರು. ಅಂದರೆ 60 ಚಕ್ರ ಪರ್ಯಾಯ ವಿದ್ಯುತ್ ಕ್ಷೇತ್ರಕ್ಕೆ ಗುರಿಯಾಗಿ ಎಲೆಕ್ಟ್ರಾನ್ ಪ್ರತಿಯೊಂದು ಫಲಕದ ಕಡೆಗೆ ಒಂದು ಸೆಕೆಂಡಿಗೆ 60 ಬಾರಿ ಸೆಳೆಯಲ್ಪಡುವುದು ಎಂದು ಇಂಗಿತ.

ಪರ್ಯಾಯ ವಿದ್ಯುತ್ ಕ್ಷೇತ್ರದಿಂದ ವೇಗೋತ್ಕರ್ಷಿತವಾದ ಎಲೆಕ್ಟ್ರಾನುಗಳು ಭಾಸ್ವರದ ಇತರ ಎಲೆಕ್ಟ್ರಾನುಗಳನ್ನು ಉನ್ನತ ಶಕ್ತಿಮಟ್ಟಗಳಿಗೆ ಏರಿಸುವುವು. ಇವು ತಮ್ಮ ಹಿಂದಿನ ಶಕ್ತಿಮಟ್ಟಗಳಿಗೆ ಮರಳಿದಾಗ ಬೆಳಕು ಬೀರುತ್ತವೆ.

ಭಾಸ್ವರವನ್ನು ಎರಡು ರೀತಿ ಉದ್ರೇಕಿಸಬಹುದು. 1. ಸೆಕೆಂಡಿನಲ್ಲಿ ಜರಗುವ ಚಕ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಅದಕ್ಕೆ ಅನುಗುಣವಾಗಿ ಎಲೆಕ್ಟ್ರಾನುಗಳೂ ಅಷ್ಟೇ ಸಾರಿ ಫಲಕಗಳ ಕಡೆಗೆ ಸೆಳೆಯಲ್ಪಡುತ್ತವೆ. ಇದರಿಂದ ಉನ್ನತ ಶಕ್ತಿಮಟ್ಟಗಳನ್ನು ತಲುಪುವ ಎಲೆಕ್ಟ್ರಾನುಗಳ ಸಂಖ್ಯೆ ಹೆಚ್ಚಿ ವರ್ಣಪ್ರಭೆ ಹೆಚ್ಚು ಉಂಟಾಗುವುದು. ಆದರೆ ಈಗ ಎಲೆಕ್ಟ್ರಾನುಗಳು ಫಲಕಗಳ ಕಡೆಗೆ ರಭಸದಿಂದ ನುಗ್ಗುವುದರಿಂದ ಅವುಗಳ ನಡುವೆ ಸಂಘಟನೆ ಹೆಚ್ಚುವುದು. ಹೀಗಾಗಕೂಡದು. ಏಕೆಂದರೆ ಎಲೆಕ್ಟ್ರಾನುಗಳು ಉನ್ನತ ಶಕ್ತಿಮಟ್ಟಗಳಿಗೆ ಏರಬೇಕಾದರೆ ಅವುಗಳ ನಡುವೆ ಸಂಘಟ್ಟನೆ ವಿರಳವಾಗಿರುವುದು ಅಪೇಕ್ಷಣೀಯ. ಆದ್ದರಿಂದ ಮೊದಲನೆಯ ಕ್ರಮವೇ ಸಾಧು.

ವೈದ್ಯುತ ಭಾಸ್ವರಕ್ಕೆ ಸತುವಿನ ಸಲ್ಫೈಡ್ ಉತ್ತಮ ನಿದರ್ಶನ. ಇದರ ಎಲೆಕ್ಟ್ರಾನಿಕ್ ಶಕ್ತಿಮಟ್ಟಗಳ ನಡುವಿನ ಅಂತರ ಹೇಗಿದೆಯೆಂದರೆ ಎಲೆಕ್ಟ್ರಾನ್ ಮೇಲ್ಮಟ್ಟದಿಂದ ಅದರ ಕೆಳಗಿನ ಮಟ್ಟಕ್ಕೆ ಜಿಗಿದಾಗ ದೃಗ್ಗೋಚರ ಬೆಳಕು ಹೊರ ಬೀಳುವುದು. ಆದರೆ ಸತುವಿನ ಸಲೈಡಿನ ಎಲೆಕ್ಟ್ರಾನುಗಳಿಗೆ ಇಷ್ಟು ಅಂತರವನ್ನು ಲಂಘಿಸುವ ಸಾಮಥ್ರ್ಯವಿಲ್ಲ. ಅವುಗಳ ನಡುವೆ ಸಣ್ಣ ಸಣ್ಣ ಹಂತಗಳನ್ನು ಏರ್ಪಡಿಸಿದರೆ ಆಗ ಮಾತ್ರ ಅವು ಈ ಹಂತಗಳ ಮೂಲಕ (ಏಣಿಯಂತೆ) ಮೇಲೇರಿ ಅನಂತರ ಅದೇ ಪ್ರಕಾರ ಕೆಳಕ್ಕೆ ಕುಪ್ಪಳಿಸಬಲ್ಲವು. ಇದರ ಸಲುವಾಗಿ ರಂಗಿನ ಸಮಯೋಜನೆಯಲ್ಲಿ ತಾಮ್ರ, ಕ್ಲೋರಿನ್ ಪರಮಾಣುಗಳನ್ನು ಸಂಯುಕ್ತಗಳ ರೂಪದಲ್ಲಿ ಸೇರಿಸುವುದು ವಾಡಿಕೆ.

ದೂರವಾಣಿ, ರೇಡಿಯೋ ಮತ್ತು ಗಡಿಯಾರದ ಮುಖಫಲಕಗಳು, ವಿಮಾನ ನಿಯಂತ್ರಣ ಕೋಣೆಯಲ್ಲಿರುವ ಅನೇಕ ಯಾಂತ್ರಿಕ ಸಲಕರಣೆಗಳು ಮತ್ತು ಮಾಪಕಗಳು ಸ್ವಯಂಪ್ರಕಾಶಿಸುವಂತೆ ಮಾಡಲು ಈ ತಂತ್ರ ಸಹಾಯಕ.		(ಹೆಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ